ವಿಲ್ಟರ್ ಫೋರ್ಸ್, ವಿಲಿಯಮ್
	1759-1833. ಬ್ರಿಟಿಷ್ ಮೂಲದ ಮಾನವ ಪ್ರೇಮಿ, ಲೋಕೋಪಕಾರಿ, ಗುಲಾಮಗಿರಿ ಪದ್ಧತಿಯ ವಿರೋಧಿ. ಇವನು ಹಲ್ ಪಟ್ಟಣದಲ್ಲಿ 1759ರಲ್ಲಿ ಜನಿಸಿದ. ಕೇಂಬ್ರ್ರಿಜ್‍ನಲ್ಲಿ ಪ್ರೌಢವ್ಯಾಸಂಗ ಮಾಡಿದ. ಪ್ರಾಟೆಸ್ಟಂಟ್ ಮತದ ಐಝಾಕ್ ವಿಲಿಯಮ್ ಇವನ ಗುರು. ವಿಲಿಯಮ್ ಕರ್ಮಾಚರಣೆ ಸಂಸ್ಕಾರಗಳಿಗಿಂತಲೂ, ಶ್ರದ್ಧೆ ಭಕ್ತಿಗಳೇ ಮುಕ್ತಿಗೆ ಮಾರ್ಗ ಎಂಬ ತತ್ತ್ವದಲ್ಲಿ ದೃಢ ನಂಬಿಕೆ ಇಟ್ಟಿದ್ದ. ವಿಲಿಯಮ್‍ನ ಬೋಧನೆಯಿಂದ ಇವನು ಕೂಡ ಈ ಪ್ರಾಟೆಸ್ಟಂಟ್ ಪಂಥಕ್ಕೆ ಸೇರಿದ. 

	ತನ್ನ 21ನೆಯ ವಯಸ್ಸಿನಲ್ಲಿ ಪಾರ್ಲಿಮೆಂಟಿಗೆ ಚುನಾಯಿತನಾದ ಇವನು, ಆಗಿನ ಮುತ್ಸದ್ದಿಗಳ ಪರಮ ಮಿತ್ರನಾದ. ಗುಲಾಮಗಿರಿಯನ್ನು ತಡೆಯಲು ತನ್ನ ಜೀವನವನ್ನೇ ಮುಡುಪಿಟ್ಟ. 1787 ರಲ್ಲಿ ಪಿಟ್ ಮೊದಲಾದ ಗಣ್ಯವ್ಯಕ್ತಿಗಳ ಬೆಂಬಲದಿಂದ ಗುಲಾಮಗಿರಿಯನ್ನು ತಡೆಯುವ ಆಂದೋಲನವನ್ನು ಮುಂದುವರಿಸಿದ. 1823 ರಲ್ಲಿ ಗುಲಾಮಗಿರಿಯನ್ನು ಅಂತ್ಯಗೊಳಿಸಲು ಒಂದು ಸಂಸ್ಥೆಯನ್ನು ಸ್ಥಾಪಿಸಿದ. 20 ವರುಷಗಳವರೆಗೆ ಗುಲಾಮಗಿರಿಯನ್ನು ತಡೆಯಲು ಆಂದೋಲನ ನಡೆಯಿತು. 1833ರ ಸುಮಾರಿಗೆ ಗುಲಾಮಗಿರಿ ತಡೆಯಲು ರಾಜಮುದ್ರೆ ಬಿದ್ದಿತು. ಇವನು ಗುಲಾಮಗಿರಿಯ ರದ್ಧತಿ ಬಿಲ್ಲಿನ ಎರಡನೆಯ ವಾಚನದ ವರದಿಯನ್ನು ಮರಣಶಯ್ಯೆ ಮೇಲೆ ಕೇಳುವಂತಾಯಿತು.

	ಕ್ಲಾಪ್‍ಹ್ಯಾಮ್ ಪಂಥದ ಧುರೀಣತ್ವ ವಹಿಸಿ, ಈ ಧರ್ಮ ಪ್ರಸಾರ ಮಾಡಲು ಕ್ರಿಶ್ಚಿಯನ್ ಅಬ್ಸರ್ವರ್ ಎಂಬ ಪತ್ರಿಕೆಯನ್ನು ಆರಂಭಿಸಿದ. ಮಾನವ ಕಲ್ಯಾಣಕ್ಕಾಗಿ ತನ್ನ ಆಸ್ತಿಯ ಬಹುಭಾಗವನ್ನು ವ್ಯಯಿಸಿದ. ಈತ 1833ರಲ್ಲಿ ನಿಧನನಾದ.	
(ಆರ್.ಆರ್.ಎ.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ